1 حم

ಹಾಮೀಮ್


2تَنْزِيلُ الْكِتَابِ مِنَ اللَّهِ الْعَزِيزِ الْحَكِيمِ

ಈ ಗ್ರಂಥದ ಅವತೀರ್ಣವು ಪ್ರಬಲನೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದಾಗಿರುತ್ತದೆ.


3مَا خَلَقْنَا السَّمَاوَاتِ وَالْأَرْضَ وَمَا بَيْنَهُمَا إِلَّا بِالْحَقِّ وَأَجَلٍ مُسَمًّى ۚ وَالَّذِينَ كَفَرُوا عَمَّا أُنْذِرُوا مُعْرِضُونَ

ನಾವು ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರುವುದೆಲ್ಲವನ್ನೂ ಪರಮ ಸತ್ಯವಾಗಿ ಹಾಗೂ ಒಂದು ನಿಶ್ಚಿತ ಅವಧಿಯನ್ನು ನಿರ್ಧರಿಸಿ ಸೃಷ್ಟಿಸಿದ್ದೇವೆ. ಆದರೆ ಈ ಸತ್ಯನಿಷೇಧಿಗಳು ಇವರಿಗೆ ಎಚ್ಚರಿಕೆ ನೀಡಲಾಗಿರುವಂತಹ ವಾಸ್ತವಿಕತೆಯ ಕಡೆಯಿಂದ ಮುಖ ತಿರುಗಿಸಿಕೊಂಡಿದ್ದಾರೆ.


4قُلْ أَرَأَيْتُمْ مَا تَدْعُونَ مِنْ دُونِ اللَّهِ أَرُونِي مَاذَا خَلَقُوا مِنَ الْأَرْضِ أَمْ لَهُمْ شِرْكٌ فِي السَّمَاوَاتِ ۖ ائْتُونِي بِكِتَابٍ مِنْ قَبْلِ هَٰذَا أَوْ أَثَارَةٍ مِنْ عِلْمٍ إِنْ كُنْتُمْ صَادِقِينَ

ಸಂದೇಶವಾಹಕರೇ, ಇವರೊಡನೆ (ಹೀಗೆ) ಹೇಳಿರಿ: "ನೀವು ಅಲ್ಲಾಹನನ್ನು ಬಿಟ್ಟು ಪ್ರಾರ್ಥಿಸುತ್ತಿರುವವುಗಳು ಏನಾಗಿರುತ್ತವೆಂಬುದನ್ನು ನೀವು ಕಣ್ತೆರೆದು ನೋಡಿದಿರಾ? ಅವರು ಈ ಭೂಮಿಯಲ್ಲಿ ಏನನ್ನು ಸೃಷ್ಟಿಸಿ ದ್ದಾರೆಂಬುದನ್ನು ಅಥವಾ ಆಕಾಶಗಳ ಸೃಷ್ಟಿ ಹಾಗೂ ವ್ಯವಸ್ಥಾಪನೆಯಲ್ಲಿ ಅವರದ್ದೇನಾದರೂ ಪಾಲಿದೆಯೇ ಎಂಬುದನ್ನು ನನಗೆ ತೋರಿಸುವಿರಾ? ನೀವು ಸತ್ಯವಾದಿಗಳಾಗಿದ್ದರೆ ಇದಕ್ಕಿಂತ ಮುಂಚೆ ಬಂದ ಯಾವುದಾದರೂ ಗ್ರಂಥ ಅಥವಾ ಜ್ಞಾನದ ಯಾವುದಾದರೂ ಪಳಿಯುಳಿಕೆಯು (ಈ ನಿಮ್ಮ ನಂಬಿಕೆಗಳಿಗೆ ಆಧಾರವಾಗಿ) ನಿಮ್ಮ ಬಳಿಯಲ್ಲಿದ್ದರೆ ಅದನ್ನೇ ತನ್ನಿರಿ.


5وَمَنْ أَضَلُّ مِمَّنْ يَدْعُو مِنْ دُونِ اللَّهِ مَنْ لَا يَسْتَجِيبُ لَهُ إِلَىٰ يَوْمِ الْقِيَامَةِ وَهُمْ عَنْ دُعَائِهِمْ غَافِلُونَ

ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದವರೆಗೂ ಅವನಿಗೆ ಉತ್ತರ ಕೊಡಲಾಗದಂತಹವರನ್ನು ಪ್ರಾರ್ಥಿಸುವವನಿಗಿಂತಲೂ ಹೆಚ್ಚು ದಾರಿಗೆಟ್ಟವನು ಇನ್ನಾರಿರಬಹುದು? ಮಾತ್ರವಲ್ಲ, ಅವರಿಗಂತೂ ಪ್ರಾರ್ಥಿಸುವವರು ತಮ್ಮನ್ನು ಪ್ರಾರ್ಥಿಸುತ್ತಿದ್ದಾರೆಂಬ ಅರಿವು ಕೂಡಾ ಇಲ್ಲ.


6وَإِذَا حُشِرَ النَّاسُ كَانُوا لَهُمْ أَعْدَاءً وَكَانُوا بِعِبَادَتِهِمْ كَافِرِينَ

ಸಕಲ ಮಾನವರೂ ಒಟ್ಟುಗೂಡಿಸಲ್ಪಡುವಂದು ಅವರು ತಮ್ಮನ್ನು ಪ್ರಾರ್ಥಿಸುತ್ತಿದ್ದವರ ಶತ್ರುಗಳಾಗಿ ಬಿಡುವರು ಮತ್ತು ಅವರು ತಮ್ಮನ್ನು ಆರಾಧಿಸುತ್ತಿದ್ದರೆಂಬುದನ್ನೇ ನಿರಾಕರಿಸಿ ಬಿಡುವರು.


7وَإِذَا تُتْلَىٰ عَلَيْهِمْ آيَاتُنَا بَيِّنَاتٍ قَالَ الَّذِينَ كَفَرُوا لِلْحَقِّ لَمَّا جَاءَهُمْ هَٰذَا سِحْرٌ مُبِينٌ

ಇವರಿಗೆ ನಮ್ಮ ಸುಸ್ಪಷ್ಟವಾದ ಸೂಕ್ತಗಳನ್ನು ಓದಿ ಹೇಳುವಾಗ ಹಾಗೂ ಸತ್ಯವು ಇವರ ಮುಂದೆ ಬಂದು ಬಿಡುವಾಗ ಈ ಸತ್ಯನಿಷೇಧಿಗಳು ಅದರ ಕುರಿತು, "ಇದು ಸ್ಪಷ್ಟವಾದ ಜಾದೂಗಾರಿಕೆ" ಎಂದು ಹೇಳುತ್ತಾರೆ.


8أَمْ يَقُولُونَ افْتَرَاهُ ۖ قُلْ إِنِ افْتَرَيْتُهُ فَلَا تَمْلِكُونَ لِي مِنَ اللَّهِ شَيْئًا ۖ هُوَ أَعْلَمُ بِمَا تُفِيضُونَ فِيهِ ۖ كَفَىٰ بِهِ شَهِيدًا بَيْنِي وَبَيْنَكُمْ ۖ وَهُوَ الْغَفُورُ الرَّحِيمُ

ಸಂದೇಶವಾಹಕರು ಇದನ್ನು ಸ್ವತಃ ಸೃಷ್ಟಿಸಿದ್ದೆಂದು ಇವರು ಹೇಳುತ್ತಿರುವರೇ? ಇವರೊಡನೆ ಹೇಳಿರಿ- "ಇದನ್ನು ಸ್ವತಃ ನಾನೇ ರಚಿಸಿದ್ದರೆ, ನೀವು ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ರಕ್ಷಿಸಲಾರಿರಿ. ನೀವು ಕಟ್ಟುತ್ತಿರುವ ಮಾತುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿ ಹೇಳಲು ಅವನೇ ಸಾಕು. ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ."


9قُلْ مَا كُنْتُ بِدْعًا مِنَ الرُّسُلِ وَمَا أَدْرِي مَا يُفْعَلُ بِي وَلَا بِكُمْ ۖ إِنْ أَتَّبِعُ إِلَّا مَا يُوحَىٰ إِلَيَّ وَمَا أَنَا إِلَّا نَذِيرٌ مُبِينٌ

ಇವರೊಡನೆ ಹೇಳಿರಿ - "ನಾನೊಬ್ಬ ಅಪೂರ್ವ ಸಂದೇಶವಾಹಕನಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗರಿಯದು. ನಾನಂತು ನನ್ನ ಬಳಿಗೆ ಕಳುಹಿಸಲಾಗುತ್ತಿರುವ ದಿವ್ಯವಾಣಿಯನ್ನು ಅನುಸರಿಸುತ್ತೇನೆ. ನಾನೊಬ್ಬ ಸುಸ್ಪಷ್ಟ ಎಚ್ಚರಿಕೆ ನೀಡುವವನೇ ಹೊರತು ಇನ್ನೇನೂ ಅಲ್ಲ."


10قُلْ أَرَأَيْتُمْ إِنْ كَانَ مِنْ عِنْدِ اللَّهِ وَكَفَرْتُمْ بِهِ وَشَهِدَ شَاهِدٌ مِنْ بَنِي إِسْرَائِيلَ عَلَىٰ مِثْلِهِ فَآمَنَ وَاسْتَكْبَرْتُمْ ۖ إِنَّ اللَّهَ لَا يَهْدِي الْقَوْمَ الظَّالِمِينَ

ಸಂದೇಶವಾಹಕರೇ ಇವರೊಡನೆ ಹೇಳಿರಿ: "ಒಂದು ವೇಳೆ ಈ ಸಂದೇಶವು ಅಲ್ಲಾಹನ ಕಡೆಯಿಂದಲೇ ಬಂದಿದ್ದು ನೀವಿದನ್ನು ತಿರಸ್ಕರಿಸಿಬಿಟ್ಟರೆ (ನಿಮ್ಮ ಗತಿ ಏನಾದೀತು) ಎಂದು ನೀವೆಂದಾದರೂ ಯೋಚಿಸಿರುವಿರಾ? ಇದರಂತಹ ಒಂದು ವಾಣಿಯ ಬಗ್ಗೆ ಬನೀಇಸ್ರಾಈಲರ ಒಬ್ಬ ಸಾಕ್ಷಿದಾರನು ಸಾಕ್ಷಿಯನ್ನೂ ಹೇಳಿದ್ದಾನೆ. ಅವನು ವಿಶ್ವಾಸವಿಟ್ಟನು ಮತ್ತು ನೀವು ನಿಮ್ಮ ಅಹಂಕಾರದಲ್ಲೇ ಬಿದ್ದುಬಿಟ್ಟಿರಿ. ಇಂತಹ ಅಕ್ರಮಿಗಳಿಗೆ ಅಲ್ಲಾಹನು ಸನ್ಮಾರ್ಗ ನೀಡುವುದಿಲ್ಲ.