1 حم

ಹಾ ಮೀಮ್.


2تَنْزِيلُ الْكِتَابِ مِنَ اللَّهِ الْعَزِيزِ الْعَلِيمِ

ಈ ಗ್ರಂಥದ ಅವತೀರ್ಣವು ಅಲ್ಲಾಹನ ಕಡೆಯಿಂದಾಗಿರುತ್ತದೆ. ಅವನು ಪ್ರಬಲನೂ ಸರ್ವಜ್ಞನೂ-


3غَافِرِ الذَّنْبِ وَقَابِلِ التَّوْبِ شَدِيدِ الْعِقَابِ ذِي الطَّوْلِ ۖ لَا إِلَٰهَ إِلَّا هُوَ ۖ إِلَيْهِ الْمَصِيرُ

ಪಾಪಗಳನ್ನು ಕ್ಷಮಿಸುವವನೂ ಪಶ್ಚಾತ್ತಾಪ ಸ್ವೀಕರಿಸುವವನೂ ಕಠಿಣ ಶಿಕ್ಷೆ ಕೊಡುವವನೂ ಮಹಾ ಅನುಗ್ರಹಿಯೂ ಆಗಿರುತ್ತಾನೆ. ಅವನ ಹೊರತು ಬೇರೆ ಆರಾಧ್ಯರಿಲ್ಲ, ಸರ್ವರಿಗೂ ಅವನ ಕಡೆಗೇ ಮರಳಬೇಕಾಗಿದೆ.


4مَا يُجَادِلُ فِي آيَاتِ اللَّهِ إِلَّا الَّذِينَ كَفَرُوا فَلَا يَغْرُرْكَ تَقَلُّبُهُمْ فِي الْبِلَادِ

ಸತ್ಯವನ್ನು ನಿಷೇಧಿಸಿದವರ ಹೊರತು ಇನ್ನಾರೂ ಅಲ್ಲಾಹನ ವಚನಗಳ ಬಗ್ಗೆ ಜಗಳಾಡುವುದಿಲ್ಲ. ಆದುದರಿಂದ ಜಗತ್ತಿನ ನಾಡುಗಳಲ್ಲಿ ಅವರ ಚಲನವಲನಗಳು ನಿಮ್ಮನ್ನು ವಂಚಿಸದಿರಲಿ.


5كَذَّبَتْ قَبْلَهُمْ قَوْمُ نُوحٍ وَالْأَحْزَابُ مِنْ بَعْدِهِمْ ۖ وَهَمَّتْ كُلُّ أُمَّةٍ بِرَسُولِهِمْ لِيَأْخُذُوهُ ۖ وَجَادَلُوا بِالْبَاطِلِ لِيُدْحِضُوا بِهِ الْحَقَّ فَأَخَذْتُهُمْ ۖ فَكَيْفَ كَانَ عِقَابِ

ಇವರಿಗಿಂತ ಮುಂಚೆ ನೂಹರ ಜನಾಂಗವೂ ಸುಳ್ಳಾಗಿಸಿದೆ. ಆ ಬಳಿಕ ಇತರ ಅನೇಕ ಕೂಟಗಳೂ ಹೀಗೆ ಮಾಡಿವೆ. ಪ್ರತಿಯೊಂದು ಜನಾಂಗವೂ ತನ್ನ ಸಂದೇಶವಾಹಕನನ್ನು ಸೆರೆಹಿಡಿಯಲಿಕ್ಕಾಗಿ ಅವನ ಮೇಲೆ ಎರಗಿತು. ಅವರೆಲ್ಲರೂ ಮಿಥ್ಯದ ಅಸ್ತ್ರಗಳಿಂದ ಸತ್ಯವನ್ನು ಕೀಳಾಗಿಸಲು ಯತ್ನಿಸಿದರು. ಆದರೆ ಕೊನೆಗೆ ನಾನು ಅವರನ್ನು ಹಿಡಿದು ಬಿಟ್ಟೆನು. ನನ್ನ ಶಿಕ್ಷೆಯು ಎಷ್ಟು ಕಠಿಣವಾಗಿತ್ತೆಂದು ನೋಡಿರಿ.


6وَكَذَٰلِكَ حَقَّتْ كَلِمَتُ رَبِّكَ عَلَى الَّذِينَ كَفَرُوا أَنَّهُمْ أَصْحَابُ النَّارِ

ಇದೇ ರೀತಿಯಲ್ಲಿ ಅವರು ಖಂಡಿತವಾಗಿಯೂ ನರಕವಾಸಿಗಳಾಗಲಿರುವರೆಂಬ ನಿಮ್ಮ ಪ್ರಭುವಿನ ತೀರ್ಮಾನವು ಸತ್ಯನಿಷೇಧಿಗಳಾಗಿರುವ ಎಲ್ಲರಿಗೆ ಅನ್ವಯವಾಗಿಬಿಟ್ಟಿದೆ.


7الَّذِينَ يَحْمِلُونَ الْعَرْشَ وَمَنْ حَوْلَهُ يُسَبِّحُونَ بِحَمْدِ رَبِّهِمْ وَيُؤْمِنُونَ بِهِ وَيَسْتَغْفِرُونَ لِلَّذِينَ آمَنُوا رَبَّنَا وَسِعْتَ كُلَّ شَيْءٍ رَحْمَةً وَعِلْمًا فَاغْفِرْ لِلَّذِينَ تَابُوا وَاتَّبَعُوا سَبِيلَكَ وَقِهِمْ عَذ

\'ವಿಶ್ವಸಿಂಹಾಸನ\'ವನ್ನು ಹೊತ್ತ ದೇವಚರರು ಮತ್ತು ಅದರ ಸುತ್ತಲೂ ಉಪಸ್ಥಿತರಿರುವವರು ತಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಅವನನ್ನು ಸ್ತುತಿಸುತ್ತಿರುತ್ತಾರೆ. ಅವರು ಅವನ ಮೇಲೆ ವಿಶ್ವಾಸವಿರಿಸುತ್ತಾರೆ ಮತ್ತು ಸತ್ಯವಿಶ್ವಾಸಿಗಳ ಪಾಪ ವಿಮೋಚನೆಗಾಗಿ ಪ್ರಾರ್ಥಿಸುತ್ತಾರೆ. ಅವರು ಹೇಳುತ್ತಾರೆ; ನಮ್ಮ ಪ್ರಭೂ, ನೀನು ನಿನ್ನ ಕೃಪೆ ಮತ್ತು ನಿನ್ನ ಜ್ಞಾನದೊಂದಿಗೆ ಸಕಲ ವಸ್ತುಗಳನ್ನು ಆವರಿಸಿಕೊಂಡಿರುವೆ. ಆದುದರಿಂದ ಪಶ್ಚಾತ್ತಾಪಪಟ್ಟವರನ್ನು ಹಾಗೂ ನಿನ್ನ ಮಾರ್ಗವನ್ನು ಸ್ವೀಕರಿಸಿ ಕೊಂಡವರನ್ನು ಕ್ಷಮಿಸು ಮತ್ತು ನರಕ ಯಾತನೆಯಿಂದ ರಕ್ಷಿಸು.


8رَبَّنَا وَأَدْخِلْهُمْ جَنَّاتِ عَدْنٍ الَّتِي وَعَدْتَهُمْ وَمَنْ صَلَحَ مِنْ آبَائِهِمْ وَأَزْوَاجِهِمْ وَذُرِّيَّاتِهِمْ ۚ إِنَّكَ أَنْتَ الْعَزِيزُ الْحَكِيمُ

ನಮ್ಮ ಪ್ರಭೂ, ನೀನು ಅವರಿಗೆ ವಾಗ್ದಾನ ಮಾಡಿರುವ ಶಾಶ್ವತವಾದ ಸ್ವರ್ಗೋದ್ಯಾನಗಳಲ್ಲಿ ಅವರನ್ನು ಪ್ರವೇಶಗೊಳಿಸು. ಅವರ ಪಿತರ, ಪತ್ನಿಯರ ಮತ್ತು ಮಕ್ಕಳ ಪೈಕಿ ಸಜ್ಜನರಾದವರನ್ನು ಕೂಡಾ ಅವರೊಂದಿಗೆ ಅಲ್ಲಿಗೆ ತಲುಪಿಸು. ನಿಶ್ಚಯವಾಗಿಯೂ ನೀನು ಪ್ರಬಲನೂ ಯುಕ್ತಿವಂತನೂ ಆಗಿರುವೆ.


9وَقِهِمُ السَّيِّئَاتِ ۚ وَمَنْ تَقِ السَّيِّئَاتِ يَوْمَئِذٍ فَقَدْ رَحِمْتَهُ ۚ وَذَٰلِكَ هُوَ الْفَوْزُ الْعَظِيمُ

ಅವರನ್ನು ಕೆಡುಕುಗಳಿಂದ ರಕ್ಷಿಸು. ನೀನು ಆ ದಿನ ಯಾರನ್ನು ಕೆಡುಕುಗಳಿಂದ ರಕ್ಷಿಸಿದೆಯೋ ಅವನ ಮೇಲೆ ನೀನು ಮಹಾ ಕೃಪೆಗೈದೆ. ಇದುವೇ ಮಹಾಯಶಸ್ಸಾಗಿದೆ.


10إِنَّ الَّذِينَ كَفَرُوا يُنَادَوْنَ لَمَقْتُ اللَّهِ أَكْبَرُ مِنْ مَقْتِكُمْ أَنْفُسَكُمْ إِذْ تُدْعَوْنَ إِلَى الْإِيمَانِ فَتَكْفُرُونَ

ಸತ್ಯನಿಷೇಧಿಗಳೊಡನೆ ಪುನರುತ್ಥಾನ ದಿನ ಹೀಗೆ ಕೂಗಿ ಹೇಳಲಾಗುವುದು- \"ಇಂದು ನಿಮಗೆ ನಿಮ್ಮ ಮೇಲೆ ಎಷ್ಟು ತೀವ್ರವಾದ ಕೋಪ ಬರುತ್ತಿದೆಯೋ ಅದಕ್ಕಿಂತಲೂ ತೀವ್ರವಾದ ಕೋಪವು ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದ ವೇಳೆ ನೀವು ನಿರಾಕರಿಸುತ್ತಿದ್ದಾಗ, ಅಲ್ಲಾಹನಿಗೆ ನಿಮ್ಮ ಮೇಲೆ ಬರುತ್ತಿತ್ತು.\"