1 الم

ಅಲಿಫ್ ಲಾಮ್ಮೀಮ್.


2اللَّهُ لَا إِلَٰهَ إِلَّا هُوَ الْحَيُّ الْقَيُّومُ

ಅಲ್ಲಾಹ್- ಅವನ ಅಸ್ತಿತ್ವವು ಚಿರಂತನವಾಗಿದ್ದು, ವಿಶ್ವ ವ್ಯವಸ್ಥಾಪನೆ ಮಾಡುತ್ತಲಿದೆ. ವಸ್ತುತಃ ಅವನ ಹೊರತು ಅನ್ಯ ಆರಾಧ್ಯನಿಲ್ಲ.


3نَزَّلَ عَلَيْكَ الْكِتَابَ بِالْحَقِّ مُصَدِّقًا لِمَا بَيْنَ يَدَيْهِ وَأَنْزَلَ التَّوْرَاةَ وَالْإِنْجِيلَ

ಓ ಪೈಗಂಬರರೇ, ಅವನು ನಿಮ್ಮ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಇದು ಸತ್ಯವನ್ನು ತಂದಿದೆ. ಇದು ಈ ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ. ಇದಕ್ಕಿಂತ ಮುಂಚೆ ಅವನು ಮಾನವನ ಸನ್ಮಾರ್ಗ ದರ್ಶನಕ್ಕಾಗಿ ತೌರಾತ್ ಮತ್ತು ಇಂಜೀಲನ್ನು ಅವತೀರ್ಣಗೊಳಿಸಿದ್ದನು ಮತ್ತು ಅವನು (ಸತ್ಯಾಸತ್ಯತೆಗಳ ತಾರತಮ್ಯ ತೋರಿಸುವ) ಒರೆಗಲ್ಲನ್ನೂ ಅವತೀರ್ಣ ಗೊಳಿಸಿರುತ್ತಾನೆ.


4مِنْ قَبْلُ هُدًى لِلنَّاسِ وَأَنْزَلَ الْفُرْقَانَ ۗ إِنَّ الَّذِينَ كَفَرُوا بِآيَاتِ اللَّهِ لَهُمْ عَذَابٌ شَدِيدٌ ۗ وَاللَّهُ عَزِيزٌ ذُو انْتِقَامٍ

ಇನ್ನು ಅಲ್ಲಾಹನ ಆದೇಶಗಳನ್ನು ನಿರಾಕರಿಸುವವರಿಗೆ ನಿಶ್ಚಯವಾಗಿಯೂ ಘೋರ ಶಿಕ್ಷೆ ಸಿಗುವುದು. ಅಲ್ಲಾಹ್ ಅತ್ಯಂತ ಶಕ್ತಿಯುಳ್ಳವನು ಮತ್ತು ಪಾಪಕಾರ್ಯಗಳಿಗೆ ತಕ್ಕ ಪ್ರತೀಕಾರ (ಶಿಕ್ಷೆ) ಮಾಡುವವನಾಗಿರುವನು.


5إِنَّ اللَّهَ لَا يَخْفَىٰ عَلَيْهِ شَيْءٌ فِي الْأَرْضِ وَلَا فِي السَّمَاءِ

ಭೂಮಿಯ ಮತ್ತು ಆಕಾಶದ ಯಾವ ವಸ್ತುವೂ ಅಲ್ಲಾಹನಿಂದ ಮರೆಯಾಗಿರುವುದಿಲ್ಲ.


6هُوَ الَّذِي يُصَوِّرُكُمْ فِي الْأَرْحَامِ كَيْفَ يَشَاءُ ۚ لَا إِلَٰهَ إِلَّا هُوَ الْعَزِيزُ الْحَكِيمُ

ನಿಮ್ಮ ಮಾತೆಯರ ಗರ್ಭಗಳಲ್ಲಿ ತನಗಿಷ್ಟ ಬಂದ ರೂಪವನ್ನು ನಿಮಗೆ ಕೊಡುವಾತನು ಅವನೇ. ಪ್ರಬಲನೂ ಯುಕ್ತಿಪೂರ್ಣನೂ ಆಗಿರುವ ಅವನ ಹೊರತು ಅನ್ಯಆರಾಧ್ಯನಿಲ್ಲ.


7هُوَ الَّذِي أَنْزَلَ عَلَيْكَ الْكِتَابَ مِنْهُ آيَاتٌ مُحْكَمَاتٌ هُنَّ أُمُّ الْكِتَابِ وَأُخَرُ مُتَشَابِهَاتٌ ۖ فَأَمَّا الَّذِينَ فِي قُلُوبِهِمْ زَيْغٌ فَيَتَّبِعُونَ مَا تَشَابَهَ مِنْهُ ابْتِغَاءَ الْفِتْنَةِ وَابْتِغَاءَ تَأْوِيلِهِ ۗ وَمَا

(ಓ ಪೈಗಂಬರರೇ) ಅವನೇ ಈ ಗ್ರಂಥವನ್ನು ನಿಮ್ಮ ಮೇಲೆ ಅವತೀರ್ಣಗೊಳಿಸಿದನು. ಈ ಗ್ರಂಥದಲ್ಲಿ ಎರಡು ಬಗೆಯ ಸೂಕ್ತಗಳಿವೆ. ಒಂದು, ಗ್ರಂಥದ ಮೂಲಾಧಾರವಾಗಿರುವ ಮುಹ್ಕಮಾತ್ ಇನ್ನೊಂದು ಮುತಶಾಬಿಹಾತ್. ಹೃದಯಗಳಲ್ಲಿ ಕೊಂಕುಳ್ಳವರು ಕ್ಷೋಭೆ ಎಬ್ಬಿಸಲಿಕ್ಕಾಗಿ 'ಮುತಶಾಬಿಹಾತ್'ಗಳ ಬೆನ್ನು ಹತ್ತುತ್ತಾರೆ ಮತ್ತು ಅವುಗಳ ದುವ್ರ್ಯಾಖ್ಯಾನ ಮಾಡಲು ಪ್ರಯತ್ನಿಸುತ್ತಾರೆ. ವಸ್ತುತಃ ಅವುಗಳ ನಿಜಾರ್ಥವನ್ನು ಅಲ್ಲಾಹನ ಹೊರತು ಇನ್ನಾರೂ ಬಲ್ಲವರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನದಲ್ಲಿ ಪರಿಪಕ್ವತೆ ಹೊಂದಿದವರು, "ನಾವು ಇವುಗಳ ಬಗ್ಗೆ ವಿಶ್ವಾಸ ತಳೆದಿದ್ದೇವೆ-ಇವೆಲ್ಲ ನಮ್ಮ ಪ್ರಭುವಿನ ವತಿಯಿಂದಲೇ ಆಗಿರುತ್ತವೆ" ಎನ್ನುತ್ತಾರೆ. ಯಾವುದರಿಂದಲೇ ಆದರೂ ಬುದ್ಧೀಜೀವಿಗಳು ಮಾತ್ರ ಸರಿಯಾದ ಪಾಠ ಪಡೆಯುತ್ತಾರೆ.


8رَبَّنَا لَا تُزِغْ قُلُوبَنَا بَعْدَ إِذْ هَدَيْتَنَا وَهَبْ لَنَا مِنْ لَدُنْكَ رَحْمَةً ۚ إِنَّكَ أَنْتَ الْوَهَّابُ

ಅವರು ಅಲ್ಲಾಹನೊಡನೆ, (ಹೀಗೆ ಪ್ರಾರ್ಥಿಸುತ್ತಿರುತ್ತಾರೆ) "ಓ ನಮ್ಮ ಪ್ರಭೂ, ನೀನು ನಮ್ಮನ್ನು ನೇರಮಾರ್ಗದಲ್ಲಿ ಹಾಕಿರುತ್ತ ಪುನಃ ನಮ್ಮ ಮನಸ್ಸುಗಳನ್ನು ದೋಷಗಳಲ್ಲಿ ಸಿಲುಕಿಸಿ ಬಿಡಬೇಡ. ನೀನು ನಿನ್ನ ಅನುಗ್ರಹ ಭಂಡಾರದಿಂದ ಕೃಪೆಯನ್ನು ನೀಡು. ನೀನೇ ನೈಜ ಮಹಾದಾನಿಯಾಗಿರುತ್ತೀ.


9رَبَّنَا إِنَّكَ جَامِعُ النَّاسِ لِيَوْمٍ لَا رَيْبَ فِيهِ ۚ إِنَّ اللَّهَ لَا يُخْلِفُ الْمِيعَادَ

ಓ ನಮ್ಮ ಪ್ರಭೂ, ನೀನು ನಿಶ್ಚಯವಾಗಿಯೂ ಅದೊಂದು ದಿನ ಎಲ್ಲ ಜನರನ್ನು ಒಟ್ಟುಗೂಡಿಸಲಿರುವೆ. ಆ ದಿನ ಬಂದೊದಗುವುದರಲ್ಲಿ ಏನೇನೂ ಸಂಶಯವಿಲ್ಲ. ನೀನು ಎಷ್ಟು ಮಾತ್ರಕ್ಕೂ ವಚನಭಂಗ ಮಾಡುವವನಲ್ಲ.


10إِنَّ الَّذِينَ كَفَرُوا لَنْ تُغْنِيَ عَنْهُمْ أَمْوَالُهُمْ وَلَا أَوْلَادُهُمْ مِنَ اللَّهِ شَيْئًا ۖ وَأُولَٰئِكَ هُمْ وَقُودُ النَّارِ

ಧರ್ಮಧಿಕ್ಕಾರ ನೀತಿಯನ್ನನುಸರಿಸಿದವರಿಗೆ ಅಲ್ಲಾಹನ ಎದುರು ಅವರ ಸಂಪತ್ತಾಗಲಿ, ಸಂತತಿಯಾಗಲಿ ಯಾವ ಕೆಲಸಕ್ಕೂ ಬರಲಾರದು. ಅವರು ನರಕಾಗ್ನಿಯ ಇಂಧನವಾಗಿಯೇ ತೀರುವರು.