1 المر ۚ تِلْكَ آيَاتُ الْكِتَابِ ۗ وَالَّذِي أُنْزِلَ إِلَيْكَ مِنْ رَبِّكَ الْحَقُّ وَلَٰكِنَّ أَكْثَرَ النَّاسِ لَا يُؤْمِنُونَ

ಅಲಿಫ್ ಲಾಮ್ಮೀಮ್ ರಾ. ಇವು ದೇವಗ್ರಂಥದ ಸೂಕ್ತಗಳು. ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ಅವತೀರ್ಣವಾದುದೆಲ್ಲವೂ ಪರಮ ಸತ್ಯ. ಆದರೆ, (ನಿಮ್ಮ ಜನಾಂಗದ) ಹೆಚ್ಚಿನವರು ವಿಶ್ವಾಸವಿರಿಸುತ್ತಿಲ್ಲ.


2اللَّهُ الَّذِي رَفَعَ السَّمَاوَاتِ بِغَيْرِ عَمَدٍ تَرَوْنَهَا ۖ ثُمَّ اسْتَوَىٰ عَلَى الْعَرْشِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۚ يُدَبِّرُ الْأَمْرَ يُفَصِّلُ الْآيَاتِ لَعَلَّكُمْ بِلِقَاءِ رَبِّكُمْ تُوقِنُون

ಆಕಾಶಗಳನ್ನೂ ನಿಮಗೆ ತೋರುವಂತಹ ಆಧಾರಗಳೇನೂ ಇಲ್ಲದೆಯೇ ನಿಲ್ಲಿಸಿದವನು ಅಲ್ಲಾಹನೇ ಆಗಿರುತ್ತಾನೆ. ಅನಂತರ ಅವನು ವಿಶ್ವ ಸಿಂಹಾಸನಾರೂಢನಾದನು ಮತ್ತು ಅವನು ಸೂರ್ಯನನ್ನೂ ಚಂದ್ರನನ್ನೂ ಒಂದು ನಿಯಮಕ್ಕೊಳಪಡಿಸಿದನು. ಈ ಸಂಪೂರ್ಣವ್ಯವಸ್ಥೆಯ ಪ್ರತಿಯೊಂದು ವಸ್ತುವೂ ಒಂದು ನಿರ್ದಿಷ್ಟ ಕಾಲದವರೆಗೆ ನಡೆಯುತ್ತಿರುತ್ತದೆ. ಇವೆಲ್ಲ ಕಾರ್ಯಗಳನ್ನು ಅವನೇ ನಿಯಂತ್ರಿಸುತ್ತಿದ್ದಾನೆ. ನೀವು ನಿಮ್ಮ ಪ್ರಭುವನ್ನು ಭೇಟಿಯಾಗಲಿರುವ ಬಗ್ಗೆ ದೃಢನಂಬಿಕೆ ತಾಳಲಿಕ್ಕಾಗಿ ಅವನು ದೃಷ್ಟಾಂತಗಳನ್ನು ಸುಸ್ಪಷ್ಟವಾಗಿ ವಿವರಿಸುತ್ತಾನೆ.


3وَهُوَ الَّذِي مَدَّ الْأَرْضَ وَجَعَلَ فِيهَا رَوَاسِيَ وَأَنْهَارًا ۖ وَمِنْ كُلِّ الثَّمَرَاتِ جَعَلَ فِيهَا زَوْجَيْنِ اثْنَيْنِ ۖ يُغْشِي اللَّيْلَ النَّهَارَ ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ

ಈ ಭೂಮಿಯನ್ನು ವಿಸ್ತರಿಸಿದವನೂ ಇದರಲ್ಲಿ ಪರ್ವತಗಳ ಗೂಟಗಳನ್ನು ನಾಟಿದವನೂ ನದಿಗಳನ್ನು ಹರಿಸಿದವನೂ ಅವನೇ. ಅವನೇ ಪ್ರತಿಯೊಂದು ವಿಧದ ಫಲಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ಅವನೇ ಹಗಲಿನ ಮೇಲೆ ಇರುಳನ್ನು ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಆಲೋಚಿಸುವವರಿಗೆ ಇವುಗಳಲ್ಲೆಲ್ಲ ಅನೇಕ ದೃಷ್ಟಾಂತಗಳಿವೆ.


4وَفِي الْأَرْضِ قِطَعٌ مُتَجَاوِرَاتٌ وَجَنَّاتٌ مِنْ أَعْنَابٍ وَزَرْعٌ وَنَخِيلٌ صِنْوَانٌ وَغَيْرُ صِنْوَانٍ يُسْقَىٰ بِمَاءٍ وَاحِدٍ وَنُفَضِّلُ بَعْضَهَا عَلَىٰ بَعْضٍ فِي الْأُكُلِ ۚ إِنَّ فِي ذَٰلِكَ لَآيَاتٍ لِقَوْمٍ يَعْقِلُونَ

ಭೂಮಿಯಲ್ಲಿ ಒಂದಕ್ಕೊಂದು ತಾಗಿಕೊಂಡಿರುವ ಬೇರೆಬೇರೆ ಭೂಭಾಗಗಳಿವೆ. ದ್ರಾಕ್ಷಾ ತೋಟಗಳಿವೆ, ಹೊಲಗಳಿವೆ, ಖರ್ಜೂರದ ಮರಗಳೂ ಇವೆ. ಅವುಗಳಲ್ಲಿ ಕೆಲವು ಒಂದೇ ಕಾಂಡದಿಂದ ಮೇಲೆದ್ದು ಕವಲೊಡೆಯದವುಗಳೂ ಇನ್ನು ಕೆಲವು ಕವಲೊಡೆದವುಗಳೂ ಇವೆ. ಇವೆಲ್ಲವುಗಳೂಒಂದೇ ನೀರಿನಿಂದ ತೋಯಿಸಲ್ಪಡುತ್ತವೆ. ಆದರೆ ನಾವು ರುಚಿಯಲ್ಲಿ ಕೆಲವನ್ನು ಮೇಲ್ತರದ್ದಾಗಿಯೂ ಇನ್ನು ಕೆಲವನ್ನು ಕೀಳ್ತರದ್ದಾಗಿಯೂ ಮಾಡಿದ್ದೇವೆ. ಇವೆಲ್ಲವುಗಳಲ್ಲಿಯೂ ವಿವೇಕಮತಿಗಳಿಗೆ ಅನೇಕ ದೃಷ್ಟಾಂತಗಳಿವೆ.


5وَإِنْ تَعْجَبْ فَعَجَبٌ قَوْلُهُمْ أَإِذَا كُنَّا تُرَابًا أَإِنَّا لَفِي خَلْقٍ جَدِيدٍ ۗ أُولَٰئِكَ الَّذِينَ كَفَرُوا بِرَبِّهِمْ ۖ وَأُولَٰئِكَ الْأَغْلَالُ فِي أَعْنَاقِهِمْ ۖ وَأُولَٰئِكَ أَصْحَابُ النَّارِ ۖ هُمْ فِيهَا خَالِدُونَ

ನೀವು ಆಶ್ಚರ್ಯಪಡುವುದಾದರೆ, "ನಾವು ಸತ್ತು ಮಣ್ಣಾಗಿ ಹೋದ ಬಳಿಕ ಪುನರಪಿ ಸೃಷ್ಟಿಸಲ್ಪಡುವೆವೋ?" ಎಂದು ಪ್ರಶ್ನಿಸುವವರ ಮಾತು ಆಶ್ಚರ್ಯಪಡತಕ್ಕದ್ದೇ ಆಗಿದೆ. ಇವರು ತಮ್ಮ ಪ್ರಭುವನ್ನು ನಿಷೇಧಿಸಿದವರು. ಇವರು ಕೊರಳಲ್ಲಿ ಕೋಳ ಬಿದ್ದವರು. ಇವರೇ ನರಕದವರು ಮತ್ತು ನರಕದಲ್ಲಿ ಸದಾ ಉಳಿಯುವವರು.


6وَيَسْتَعْجِلُونَكَ بِالسَّيِّئَةِ قَبْلَ الْحَسَنَةِ وَقَدْ خَلَتْ مِنْ قَبْلِهِمُ الْمَثُلَاتُ ۗ وَإِنَّ رَبَّكَ لَذُو مَغْفِرَةٍ لِلنَّاسِ عَلَىٰ ظُلْمِهِمْ ۖ وَإِنَّ رَبَّكَ لَشَدِيدُ الْعِقَابِ

ಇವರು ಒಳಿತಿಗಿಂತ ಮೊದಲು ಕೆಡುಕಿಗಾಗಿ ಆತುರಪಡುತ್ತಿದ್ದಾರೆ. ವಸ್ತುತಃ ಇವರಿಗಿಂತ ಮುಂಚೆ (ಈ ರೀತಿ ನಡೆದವರ ಮೇಲೆ ಅಲ್ಲಾಹನ ಯಾತನೆಯ) ಪಾಠಬೋಧಕವಾದ ದೃಷ್ಟಾಂತಗಳು ಗತಿಸಿ ಹೋಗಿವೆ. ವಾಸ್ತವದಲ್ಲಿ ನಿನ್ನ ಪ್ರಭು ಜನರ ಅತಿರೇಕಗಳನ್ನು ಲೆಕ್ಕಿಸದೆ ಕ್ಷಮಾದಾನ ಮಾಡುವವನು ಮತ್ತು ನಿನ್ನ ಪ್ರಭು ಘೋರ ಶಿಕ್ಷೆಗೆ ಗುರಿಪಡಿಸುವವನು ಎಂಬುದೂ ಪರಮಾರ್ಥ.


7وَيَقُولُ الَّذِينَ كَفَرُوا لَوْلَا أُنْزِلَ عَلَيْهِ آيَةٌ مِنْ رَبِّهِ ۗ إِنَّمَا أَنْتَ مُنْذِرٌ ۖ وَلِكُلِّ قَوْمٍ هَادٍ

ನಿಮ್ಮನ್ನು ನಿಷೇಧಿಸಿದವರು- "ಈ ವ್ಯಕ್ತಿಯ ಮೇಲೆ ಇವನ ಪ್ರಭುವಿನ ಕಡೆಯಿಂದ ಯಾವುದಾದರೊಂದು ನಿದರ್ಶನವೇಕೆ ಇಳಿದಿಲ್ಲ?" ಎಂದು ಕೇಳುತ್ತಾರೆ. ನೀವಂತು ಕೇವಲ ಎಚ್ಚರಿಕೆ ಕೊಡುವವರಾಗಿರುತ್ತೀರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಓರ್ವ ಮಾರ್ಗದರ್ಶಕನಿದ್ದಾನೆ.


8اللَّهُ يَعْلَمُ مَا تَحْمِلُ كُلُّ أُنْثَىٰ وَمَا تَغِيضُ الْأَرْحَامُ وَمَا تَزْدَادُ ۖ وَكُلُّ شَيْءٍ عِنْدَهُ بِمِقْدَارٍ

ಅಲ್ಲಾಹನು ಪ್ರತಿಯೋರ್ವ ಗರ್ಭಿಣಿಯ ಗರ್ಭವನ್ನು ಅರಿತಿರುತ್ತಾನೆ. ಅದರಲ್ಲಾಗುವ ವೃದ್ಧಿ-ಕ್ಷಯಗಳನ್ನೂ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವಿಗೂ ಅವನಲ್ಲೊಂದು ಪ್ರಮಾಣ ನಿಶ್ಚಯವಾಗಿರುತ್ತದೆ.


9عَالِمُ الْغَيْبِ وَالشَّهَادَةِ الْكَبِيرُ الْمُتَعَالِ

ಅವನು ಎಲ್ಲ ಪ್ರತ್ಯಕ್ಷಾಪ್ರತ್ಯಕ್ಷಗಳ ಜ್ಞಾನಿ. ಅವನು ಅತಿ ಮಹಾನನು ಮತ್ತು ಚಿರೋನ್ನತನು.


10سَوَاءٌ مِنْكُمْ مَنْ أَسَرَّ الْقَوْلَ وَمَنْ جَهَرَ بِهِ وَمَنْ هُوَ مُسْتَخْفٍ بِاللَّيْلِ وَسَارِبٌ بِالنَّهَارِ

ನಿಮ್ಮಲ್ಲಾರಾದರೂ ಸ್ವರವೆತ್ತಿ ಮಾತಾಡಲಿ ಅಥವಾ ಮೆಲುದನಿಯಿಂದ ಮಾತಾಡಲಿ, ನಿಶಾಂಧಕಾರದಲ್ಲಿ ಅಡಗಿರಲಿ ಅಥವಾ ಹಗಲಿನ ಬೆಳಕಿನಲ್ಲಿ ಚಲಿಸುತ್ತಿರಲಿ ಅವನ ಮಟ್ಟಿಗೆ ಎಲ್ಲವೂ ಸರಿಸಮಾನ.