1 الر ۚ تِلْكَ آيَاتُ الْكِتَابِ الْمُبِينِ

ಅಲಿಫ್ ಲಾಮ್ ರಾ. ಇವು ತನ್ನ ಅಭಿಪ್ರಾಯವನ್ನು ಸುವ್ಯಕ್ತವಾಗಿ ವಿವರಿಸಿ ಹೇಳುವ ಗ್ರಂಥದ ಸೂಕ್ತಗಳು.


2إِنَّا أَنْزَلْنَاهُ قُرْآنًا عَرَبِيًّا لَعَلَّكُمْ تَعْقِلُونَ

ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ನಾವು ಇದನ್ನು ಕುರ್ ಆನನ್ನಾಗಿ ಮಾಡಿ ಅರಬೀ ಭಾಷೆಯಲ್ಲಿ ಅವತೀರ್ಣಗೊಳಿಸಿದೆವು.


3نَحْنُ نَقُصُّ عَلَيْكَ أَحْسَنَ الْقَصَصِ بِمَا أَوْحَيْنَا إِلَيْكَ هَٰذَا الْقُرْآنَ وَإِنْ كُنْتَ مِنْ قَبْلِهِ لَمِنَ الْغَافِلِينَ

ಓ ಪೈಗಂಬರರೇ, ನಾವು ಈ ಕುರ್ ಆನನ್ನು ನಿಮ್ಮ ಕಡೆಗೆ 'ದಿವ್ಯವಾಣಿ' ಮಾಡಿ, ವೃತ್ತಾಂತಗಳನ್ನೂ ವಸ್ತುಸ್ಥಿತಿಗಳನ್ನೂ ಉತ್ತಮ ಶೈಲಿಯಲ್ಲಿ ನಿಮಗೆ ವಿವರಿಸಿ ಕೊಡುತ್ತೇವೆ. ಅನ್ಯಥಾ ಇದಕ್ಕಿಂತ ಮುಂಚೆ ನೀವು (ಈ ವಿಷಯಗಳ ಕುರಿತು) ಸಂಪೂರ್ಣ ಪ್ರಜ್ಞಾಹೀನರಾಗಿದ್ದಿರಿ.


4إِذْ قَالَ يُوسُفُ لِأَبِيهِ يَا أَبَتِ إِنِّي رَأَيْتُ أَحَدَ عَشَرَ كَوْكَبًا وَالشَّمْسَ وَالْقَمَرَ رَأَيْتُهُمْ لِي سَاجِدِينَ

ಇದು ಯೂಸುಫರು ತಮ್ಮ ಪಿತರೊಡನೆ ಹೇಳಿದ ಸಂದರ್ಭ- "ಅಪ್ಪಾ, ಹನ್ನೊಂದು ನಕ್ಷತ್ರಗಳೂ ಸೂರ್ಯನೂ ಚಂದ್ರನೂ ನನಗೆ ಸಾಷ್ಟಾಂಗ ವೆರಗುತ್ತಿರುವುದನ್ನು ನಾನು ಸ್ವಪ್ನದಲ್ಲಿ ಕಂಡಿರುತ್ತೇನೆ."


5قَالَ يَا بُنَيَّ لَا تَقْصُصْ رُؤْيَاكَ عَلَىٰ إِخْوَتِكَ فَيَكِيدُوا لَكَ كَيْدًا ۖ إِنَّ الشَّيْطَانَ لِلْإِنْسَانِ عَدُوٌّ مُبِينٌ

ಉತ್ತರವಾಗಿ ಅವರ ತಂದೆ ಇಂತೆಂದರು, "ಮಗನೇ, ನಿನ್ನ ಈ ಸ್ವಪ್ನವನ್ನು ನಿನ್ನ ಸಹೋದರರೊಡನೆ ಹೇಳಬೇಡ. ಅನ್ಯಥಾ ಅವರು ನಿನ್ನ ವಿರುದ್ಧ ಒಳಸಂಚು ನಡೆಸುವರು. ವಾಸ್ತವದಲ್ಲಿ ಶೈತಾನನು ಮಾನವನ ಪ್ರತ್ಯಕ್ಷ ಶತ್ರು.


6وَكَذَٰلِكَ يَجْتَبِيكَ رَبُّكَ وَيُعَلِّمُكَ مِنْ تَأْوِيلِ الْأَحَادِيثِ وَيُتِمُّ نِعْمَتَهُ عَلَيْكَ وَعَلَىٰ آلِ يَعْقُوبَ كَمَا أَتَمَّهَا عَلَىٰ أَبَوَيْكَ مِنْ قَبْلُ إِبْرَاهِيمَ وَإِسْحَاقَ ۚ إِنَّ رَبَّكَ عَلِيمٌ حَكِيمٌ

(ನೀನು ಸ್ವಪ್ನದಲ್ಲಿ ಕಂಡ) ಹಾಗೆಯೇ ಆಗುವುದು. ನಿನ್ನ ಪ್ರಭುವು ನಿನ್ನನ್ನು (ತನ್ನ ಕಾರ್ಯಕ್ಕಾಗಿ) ಆಯ್ದುಕೊಳ್ಳುವನು. ನಿನಗೆ ವಿಷಯಗಳ ಆಳಕ್ಕೆ ತಲುಪುವುದನ್ನು ಕಲಿಸಿಕೊಡುವನು. ಮತ್ತು ಇದಕ್ಕೆ ಮುಂಚೆ, ನಿನ್ನ ಪೂರ್ವಜರಾಗಿದ್ದ ಇಬ್ರಾಹೀಮ್ ಮತ್ತು ಇಸ್ ಹಾಕ್ರ ಮೇಲೆ ಅವನು ತನ್ನ 'ಭವ್ಯ ಕೊಡುಗೆ'ಯನ್ನು ಪೂರ್ಣಗೊಳಿಸಿದಂತೆ ನಿನ್ನ ಮೇಲೂ ಯಾಕೂಬರ ವಂಶಜರ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞನೂ ಧೀಮಂತನೂ ಆಗಿರುತ್ತಾನೆ."


7لَقَدْ كَانَ فِي يُوسُفَ وَإِخْوَتِهِ آيَاتٌ لِلسَّائِلِينَ

ವಾಸ್ತವದಲ್ಲಿ ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ಈ ಪ್ರಶ್ನಿಸುವವರಿಗೆ ದೊಡ್ಡ ನಿದರ್ಶನಗಳಿವೆ.


8إِذْ قَالُوا لَيُوسُفُ وَأَخُوهُ أَحَبُّ إِلَىٰ أَبِينَا مِنَّا وَنَحْنُ عُصْبَةٌ إِنَّ أَبَانَا لَفِي ضَلَالٍ مُبِينٍ

ಈ ಕಥೆಯ ಆರಂಭ ಹೀಗಿದೆ- ಅವರ ಸಹೋದರರು ಪರಸ್ಪರ ಹೀಗೆ ಹೇಳಿದರು: ಈ ಯೂಸುಫನೂ ಅವನ ಸಹೋದರನೂ ನಮ್ಮ ತಂದೆಗೆ ನಮ್ಮೆಲ್ಲರಿಗಿಂತ ಹೆಚ್ಚು ಪ್ರಿಯರಾಗಿದ್ದಾರೆ. ವಸ್ತುತಃ ನಾವು ಒಂದು ಸಂಪೂರ್ಣ ಕೂಟವಾಗಿದ್ದೇವೆ. ನಿಜ ಹೇಳುವುದಾದರೆ ನಮ್ಮ ಪಿತೃವರ್ಯರು ಸ್ಪಷ್ಟ ದುರ್ಮಾರ್ಗದಲ್ಲಿದ್ದಾರೆ.


9اقْتُلُوا يُوسُفَ أَوِ اطْرَحُوهُ أَرْضًا يَخْلُ لَكُمْ وَجْهُ أَبِيكُمْ وَتَكُونُوا مِنْ بَعْدِهِ قَوْمًا صَالِحِينَ

ನಿಮ್ಮ ತಂದೆಯವರ ಒಲವು ನಿಮ್ಮ ಕಡೆಗೇ ಆಗುವಂತೆ ಮಾಡಲಿಕ್ಕಾಗಿ ಯೂಸುಫನನ್ನು ಕೊಂದು ಹಾಕಿರಿ, ಇಲ್ಲವೆ ಎಲ್ಲಾದರೂ ಎಸೆದುಬಿಡಿರಿ. ಈ ಕಾರ್ಯವನ್ನು ಮಾಡಿಯಾದ ಬಳಿಕ ಸಜ್ಜನರಾಗಿರಬೇಕು.


10قَالَ قَائِلٌ مِنْهُمْ لَا تَقْتُلُوا يُوسُفَ وَأَلْقُوهُ فِي غَيَابَتِ الْجُبِّ يَلْتَقِطْهُ بَعْضُ السَّيَّارَةِ إِنْ كُنْتُمْ فَاعِلِينَ

ಆಗ ಅವರಲ್ಲೊಬ್ಬನು ಹೇಳಿದನು-"ಯೂಸುಫನನ್ನು ಕೊಲ್ಲಬೇಡಿರಿ. ಹಾಗೇನಾದರೂ ಮಾಡಲೇಬೇಕೆಂದಾದರೆ ಯಾವುದಾದರೊಂದು ಆಳವಾದ ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರು ಪ್ರವಾಸಿ ತಂಡವು ಅವನನ್ನು ಎತ್ತಿಕೊಂಡೊಯ್ಯಬಹುದು."