Log In

   (or press ESC or click the overlay)


ಪವಿತ್ರ ಕುರ್ ಆನ್ / PAVITRA QUR’AN

ತರ್ಜುಮ-ಎ-ಕುರ್ಆನ್
ಪವಿತ್ರ ಕುರ್ಆನ್ ಭಾವಾನುವಾದ ಮತ್ತು ಸಂಕ್ಷಿಪ್ತ ವಿವರಣೆ
ಮೌಲಾನ ಸಯ್ಯದ್ ಅಬುಲ್ ಆಲಾ ಮೌದೂದಿ
ಅನುವಾದಕರು
ಎಸ್. ಅಬ್ದುಲ್ ಗಫ್ಫಾರ್
ಪರಿಶೀಲನಾ ಮಂಡಳಿ
ಮೌಲಾನ ಸಯ್ಯದ್ ಯೂಸುಫ್
ಇಬ್ರಾಹೀಮ್ ಸಈದ್
ಮುಹಮ್ಮದ್ ಸಾದುಲ್ಲಾ

(TARJUMA-E-QUR'AN)
TRANSLATION OF HOLY QUR'AN WITH FOOT NOTES
MAULANA SAYYAD ABUL A'LA MAUDOODI (R)
Kannada Translation
S. ABDUL GAFFAR
Reviewed by
MAULANA SAYYAD YUSUF
IBRAHIM SAYEED
MUHAMMAD SADULLAH

ಅನುವಾದಕರ ನಿವೇದನೆ ಉರ್ದು ಭಾಷೆಯಲ್ಲಿ ಪವಿತ್ರ ಕುರ್ಆನಿನ ಅನೇಕ ಭಾಷಾಂತರ ಕೃತಿಗಳು ರಚಿತವಾಗಿವೆ. ಅದರ ನಂತರ ಯಾವುದೇ ವ್ಯಕ್ತಿ ಕೇವಲ ಬರಕತ್ತು ಮತ್ತು ಪುಣ್ಯ ಸಂಪಾದನೆಯ ಉದ್ದೇಶದಿಂದ ಹೊಸ ಭಾಷಾಂತರ ಕೃತಿಯನ್ನು ರಚಿಸುವುದು ಸಮಯ ಮತ್ತು ಪರಿಶ್ರಮದ ಸರಿಯಾದ ವ್ಯಯವೆನಿಸಲಾರದು. ಹಿಂದಿನ ಭಾಷಾಂತರ ಕೃತಿಗಳಿಂದ ಈಡೇರದ ಕುರ್ಆನಿನ ವಾಚಕರ ಯಾವುದೇ ಅವಶ್ಯಕತೆ ಈಡೇರುವುದಿದ್ದರೆ ಮಾತ್ರ ಈ ನಿಟ್ಟಿನಲ್ಲಿ ಮಾಡುವ ಯಾವುದೇ ಪ್ರಯತ್ನ ಯುಕ್ತವೆನಿಸೀತು.

ಇದೇ ಆಧಾರದಲ್ಲಿ ಈ ಪಂಕ್ತಿಗಳಲ್ಲಿ ಪವಿತ್ರ ಕುರ್ಆನಿನ ಭಾಷಾಂತರ ಮತ್ತು ವ್ಯಾಖ್ಯಾನ ಮಾಡುವ ಪ್ರಯತ್ನ ಮಾಡಲಾಗಿದೆ. ದೀರ್ಘಾವಧಿಯಿಂದ ನನ್ನಲ್ಲಿ ಒಂದು ಭಾವನೆ ಮೂಡಿತ್ತು. ಅದೇನೆಂದರೆ ನಮ್ಮ ಸುಶಿಕ್ಷಿತ ಜನಸಾಮಾನ್ಯರಲ್ಲಿ ಕುರ್ಆನಿನ ಸ್ಫೂರ್ತಿಯನ್ನು ತಿಳಿಯುವ ಮತ್ತು ಅದರ ಇಂಗಿತವನ್ನು ಅರಿಯದ ನಿಟ್ಟಿನಲ್ಲಿ ಬೆಳೆದಿರುವ ಜಿಜ್ಞಾಸೆ ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆ. ಹಿಂದಿನ ಭಾಷಾಂತರಕಾರರ ಘನತರವಾದ ಪ್ರಯತ್ನಗಳ ಹೊರತಾಗಿಯೂ ಈ ದಾಹ ಈಡೇರಿಲ್ಲ. ಈ ದಾಹವನ್ನು ನೀಗಿಸುವ ನಿಟ್ಟಿನಲ್ಲಿ ಕಿಂಚಿತ್ ಸೇವೆಯನ್ನು ನಾನೂ ಮಾಡಬಲ್ಲೆ ಎಂಬ ಭಾವನೆಯೂ ನನ್ನಲ್ಲಿ ಮೂಡುತ್ತಿತ್ತು. ಈ ಭಾವನೆಯೇ ನನ್ನನ್ನು ಈ ಪ್ರಯತ್ನಕ್ಕೆ ತೊಡಗಿಸಿತು. ಅದರ ಫಲಿತಾಂಶಗಳನ್ನೇ ಓದುಗರ ಮುಂದೆ ಸಮರ್ಪಿಸಲಾಗುತ್ತಿದೆ. ನನ್ನ ಈ ಕಿರು ಕಾಣಿಕೆ ಜನರಲ್ಲಿ ಕುರ್ಆನಿನ ತಿಳುವಳಿಕೆಯನ್ನು ಬೆಳೆಸಲು ನಿಜವಾಗಿಯೂ ಸಹಾಯಕವಾದರೆ ಅದು ನನ್ನ ಪಾಲಿಗೆ ದೊಡ್ಡ ಸುದೈವವಾಗಿ ಪರಿಣಮಿಸುವುದು.

ಈ ಕೆಲಸದ ವೇಳೆ ನನ್ನ ಮುಂದಿರುವ ಉದ್ದೇಶವೇನೆಂದರೆ ಸಾಮಾನ್ಯ ಓದುಗನೊಬ್ಬ ಕುರ್ಆನಿನ ಭಾಷಾಂತರವನ್ನು ಓದುತ್ತಾ ಹೋದಂತೆ ಅದರ ಇಂಗಿತವನ್ನು ಸ್ಪಷ್ಟವಾಗಿ ತಿಳಿಯುತ್ತಾ ಹೋಗಬೇಕು. ಕುರ್ಆನ್ ಅವನಲ್ಲಿ ಉಂಟುಮಾಡಬಯಸುವಂತಹ ಪ್ರಭಾವ ಅವನಲ್ಲುಂಟಾಗಬೇಕು. ಈ ಉದ್ದೇಶದಿಂದಲೇ ನಾನು ಪದಾನುಪದ ಅನುವಾದದ ಬದಲು ಭಾವಾನುವಾದದ ಶೈಲಿಯನ್ನು ಅನುಸರಿಸಿದ್ದೇನೆ. ಏಕೆಂದರೆ ಪದಾನುಪದ ಅನುವಾದದ ಈ ನಿಟ್ಟಿನಲ್ಲಿ ಈ ಹಿಂದೆಯೂ ಅನೇಕ ಹಿರಿಯರು ಅತ್ಯುತ್ತಮ ರೀತಿಯಲ್ಲಿ ಶ್ರಮ ವಹಿಸಿದ್ದಾರೆ. ಆದ್ದರಿಂದ ಈ ಮಾರ್ಗದಲ್ಲಿ ಇನ್ನಷ್ಟು ಪ್ರಯತ್ನ ಮಾಡುವ ಅವಶ್ಯಕತೆಯಿಲ್ಲ. ಪಾರ್ಸಿಯಲ್ಲಿ ಹ.ಶಾ ವಲೀಯುಲ್ಲಾರವರ ಭಾಷಾಂತರ ಕೃತಿ ಮತ್ತು ಉರ್ದುವಿನಲ್ಲಿ ಶಾ ಅಬ್ದುಲ್ ಕಾದರ್, ಶಾ ರಫೀಯುದ್ದೀನ್, ಮೌ| ಮಹ್ಮೂದುಲ್ ಹಸನ್, ಮೌ| ಅಶ್ರಫ್ ಅಲಿ ಮತ್ತು ಮೌ| ಫತಹ್ ಮುಹಮ್ಮದ್ ಜಾಲಂಧರಿಯವರ ಭಾಷಾಂತರ ಕೃತಿಗಳು ಪದಾನುಪದ ಅನುವಾದವನ್ನು ಬಯಸುವವರ ಉದ್ದೇಶವನ್ನು ಅತ್ಯುತ್ತಮ ರೀತಿಯಲ್ಲಿ ಈಡೇರಿಸುತ್ತವೆ. ಪದಾನುಪದ ಅನುವಾದದಿಂದ ಸರ್ವಥಾ ಈಡೇರದ ಕೆಲವು ಅವಶ್ಯಕತೆಗಳಿವೆ. ಅದನ್ನು ಈಡೇರಿಸಲಿಕ್ಕಾಗಿಯೇ ನಾನು ಈ ಭಾವಾನುವಾದದ ಮೂಲಕ ಪ್ರಯತ್ನಿಸಿದ್ದೇನೆ.

ಪದಾನುಪದ ಅನುವಾದದಿಂದ ಆಗುವ ಪ್ರಮುಖ ಲಾಭಾವೆಂದರೆ ವ್ಯಕ್ತಿಗೆ ಕುರ್ಆನಿನ ಪ್ರತಿಯೊಂದು ಪದದ ಅರ್ಥ ತಿಳಿದು ಬರುತ್ತದೆ. ಪ್ರತಿಯೊಂದು ಸೂಕ್ತದ ಕೆಳಗಿರುವ ಭಾಷಾಂತರದ ಮೂಲಕ ಈ ಸೂಕ್ತದಲ್ಲಿ ಈ ಎಲ್ಲ ವಿಷಯಗಳನ್ನು ತಿಳಿಸಲಾಗಿದೆ ಎಂದು ಅವನಿಗೆ ತಿಳಿದುಬರುತ್ತದೆ. ಆದರೆ ಈ ಪ್ರಯೋಜನದ ಜತೆಗೆ ಈ ವಿಧಾನದಲ್ಲಿ ಕೆಲವಾರು ದೋಷಗಳೂ ಇವೆ. ಅದರಿಂದಾಗಿ ಅರಬೇತರನಾದ ಒಬ್ಬ ವಾಚಕನಿಗೆ ಕುರ್ಆನಿನಿಂದ ಸರಿಯಾದ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಪದಾನುಪದ ಅನುವಾದವನ್ನು ಓದುವಾಗ ಮೊತ್ತಮೊದಲು ಸರಾಗವಾದ ಉದ್ಧರಣೆ, ಶಕ್ತಿಯುತವಾದ ವಿಶ್ಲೇಷಣೆ, ಭಾಷಾ ಸಮೃದ್ಧಿ ಮತ್ತು ಪ್ರಭಾವಶೀಲತೆಗಳ ಕೊರತೆ ಗಮನಕ್ಕೆ ಬರುತ್ತದೆ. ಕುರ್ಆನಿನ ಸಾಲುಗಳ ಕೆಳಗೆ ವ್ಯಕ್ತಿ ಅತ್ಯಂತ ನಿಸ್ತೇಜವಾದ ವಾಕ್ಯವೊಂದನ್ನು ಕಾಣುತ್ತಾನೆ. ಅದನ್ನು ಓದುವಾಗ ಅವನ ಸ್ಫೂರ್ತಿ ಉಕ್ಕೇರುವುದಿಲ್ಲ, ಮೈ ನವಿರೇಳುವುದಿಲ್ಲ, ಕಣ್ಣುಗಳಿಂದ ಕಂಬನಿ ಮಿಡಿಯುವುದಿಲ್ಲ. ಭಾವನೆಗಳು ಅಲ್ಲೋಲಕಲ್ಲೋಲವಾಗುವುದಿಲ್ಲ, ಯಾವುದೋ ವಸ್ತು-ಬುದ್ಧಿ ವಿಚಾರಗಳನ್ನು ದಾಟಿ ಹೃದಯದೊಳಕ್ಕೆ ಇಳಿಯುತ್ತಿರುವಂತೆ ಭಾಸವಾಗುವುದಿಲ್ಲ. ಇಂತಹ ಯಾವುದೇ ರೀತಿಯ ಪ್ರಭಾವ ಉಂಟಾಗುವುದಂತಿರಲಿ, ಕೆಲವೊಮ್ಮೆ "ತನಗೆ ಸಮಾನವಾದ ಗ್ರಂಥವನ್ನು ತರುವ ಬಗ್ಗೆ ಜಗತ್ತಿಗೆ ಪಂಥಾಹ್ವಾನ ನೀಡಿದ ಗ್ರಂಥ ಇದುವೇ ಆಗಿದೆಯೇ" ಎಂಬ ಸಂಶಯವೂ ಭಾಷಾಂತರವನ್ನು ಓದುವವನನ್ನು ಕಾಡದಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಪದಾನುಪದ ಅನುವಾದದ ಜರಡಿ ಔಷಧದ ಶುಷ್ಕ ಭಾಗವನ್ನು ಮಾತ್ರ ತನ್ನ ಮೂಲಕ ಸಾಗಲು ಬಿಡುತ್ತದೆ. ಕುರ್ಆನಿನ ಉದ್ಧರಣೆಯಲ್ಲಿ ತುಂಬಿರುವ ಸಾಹಿತ್ಯದ ತೀಕ್ಷ್ಣತರವಾದ ಸ್ಫೂರ್ತಿ ಸ್ವಲ್ಪಂಶವೂ ಪ್ರಸ್ತುತ ಭಾಷಾಂತರದಲ್ಲಿರುವುದಿಲ್ಲ. ಅದು ಜರಡಿ ಮೇಲ್ಭಾಗದಿಂದ ಹಾರಿ ಹೋಗುತ್ತದೆ. ನಿಜವಾಗಿ ಕುರ್ಆನಿನ ಪ್ರಭಾವಶೀಲತೆಯಲ್ಲಿ ಅದರ ಪಾವನ ಬೋಧನೆಗಳು ಮತ್ತು ಅದು ಪ್ರಸ್ತಾವಿಸುವ ಉನ್ನತ ವಿಷಯಗಳಷ್ಟೇ ಅದರ ಸಾಹಿತ್ಯ ಸಂಪನ್ನತೆಯ ಪಾಲೂ ಇದೆ. ಕಲ್ಲು ಹೃದಯವನ್ನೂ ಕರಗಿಸಿ ಬಿಡುವಂತಹ ಸಾಧನ ಇದುವೇ ಆಗಿದೆ. ಅದು ಗುಡುಗಿನ ಅಬ್ಬರದಂತೆ ಸಮಸ್ತ ಅರಬ್ ಜಗತ್ತನ್ನು ನಡುಗಿಸಿ ಬಿಟ್ಟಿತ್ತು. ಅದರ ಪ್ರಭಾವಪೂರ್ಣತೆಯನ್ನು ಅದರ ಕಡುವೈರಿಗಳೂ ಸಮ್ಮತಿಸುತ್ತಿದ್ದರು. ಮಂತ್ರ ಮುಗ್ಧಗೊಳಿಸುವ ಈ ವಾಣಿಯನ್ನು ಕೇಳುವ ಪ್ರತಿಯೊಬ್ಬನೂ ಮನಸೋತು ಬಿಡುತ್ತಾನೆಂದು ಅವರು ಭಯಪಡುತ್ತಿದ್ದರು. ಕುರ್ಆನಿನಲ್ಲಿ ಇಂತಹ ಭಾವ ಇಲ್ಲದಿರುತ್ತಿದ್ದರೆ ಮತ್ತು ಭಾಷಾಂತರ ಕೃತಿಗಳಲ್ಲಿ ಕಾಣುವಂತಹ ಭಾಷೆಯಲ್ಲೇ ಅದು ಅವತೀರ್ಣಗೊಂಡಿರುತ್ತಿದ್ದರೆ ಅರಬ್ ನಿವಾಸಿಗಳ ಮನಸ್ಸಿಗೆ ಬಿಸಿ ಮುಟ್ಟಿಸಲು ಮತ್ತು ಅವರ ಹೃದಯವನ್ನು ಮೃದುಲಗೊಳಿಸಲು ಅದು ಸಫಲವಾದಂತಹ ಘಟನೆ ಸಂಭವಿಸಲು ಎಂದೂ ಸಾಧ್ಯವಿರಲಿಲ್ಲ.

ಪದಾನುಪದ ಅನುವಾದ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರದಿರಲು ಇನ್ನೊಂದು ಕಾರಣವೇನೆಂದರೆ, ಸಾಮಾನ್ಯವಾಗಿ ಅನುವಾದವನ್ನು ಪಂಕ್ತಿಗಳೆಡೆಯಲ್ಲಿ ಕೊಡಲಾಗುತ್ತದೆ. ಯಾವ ಉದ್ದೇಶಕ್ಕಾಗಿ ವ್ಯಕ್ತಿ ಪದಾನುಪದ ಅನುವಾದವನ್ನು ಓದುತ್ತಾನೋ ಅದಕ್ಕಾಗಿ ಈ ವಿಧಾನ ಸೂಕ್ತವಾಗಿರಬಹುದು. ಏಕೆಂದರೆ ಅವನು ಪ್ರತಿಯೊಂದು ಪದ ಮತ್ತು ವಾಕ್ಯದ ಮುಂದೆ ಅದರ ಅನುವಾದವನ್ನು ಪಡೆಯುತ್ತಾನೆ. ಆದರೆ ಇದರಿಂದಾಗುವ ನಷ್ಟವೇನೆಂದರೆ ವ್ಯಕ್ತಿ ಇತರ ಗ್ರಂಥಗಳನ್ನು ಓದಿ ಪ್ರಭಾವಿತನಾಗುವಂತೆ ಸರಾಗವಾಗಿ ಓದಲು ಅಥವಾ ಪ್ರಭಾವಿತನಾಗಲು ಸಾಧ್ಯವಿಲ್ಲ. ಏಕೆಂದರೆ ಅಪರಿಚಿತ ಭಾಷೆಯೊಂದರ ಉದ್ಧರಣೆ ಬಾರಿ ಬಾರಿಗೂ ಅವನಿಗೆ ಅಡಚಣೆಯುಂಟು ಮಾಡುತ್ತದೆ. ಆಂಗ್ಲ ಭಾಷಾಂತರಗಳು ಇನ್ನಷ್ಟು ಪ್ರಭಾವಹೀನವಾಗಿವೆ. ಏಕೆಂದರೆ ಬೈಬಲ್ ನ ಭಾಷಾಂತರವನ್ನು ಅನುಸರಿಸಿ ಕುರ್ಆನಿನ ಪ್ರತಿಯೊಂದು ಸೂಕ್ತದ ಭಾಷಾಂತರವನ್ನು ಪ್ರತ್ಯ ಪ್ರತ್ಯೇಕವಾಗಿ ಸಂಖ್ಯಾನುಸಾರ ಕೊಡಲಾಗುತ್ತದೆ. ನೀವು ಎಷ್ಟೇ ಉತ್ತಮವಾದ ಒಂದು ಲೇಖನವನ್ನು ವಾಕ್ಯಗಳಲ್ಲಿ ವಿಂಗಡಿಸಿ ಒಂದರ ಕೆಳಗೆ ಒಂದರಂತೆ ಸಂಖ್ಯಾನುಸರ ಬರೆದು ಓದಿ ನೋಡಿ. ಅವಿಚ್ಛಿನ್ನವಾದ ಮತ್ತು ಕ್ರಮಬದ್ಧವಾದ ಜೋಡಿಸಲಾದ ಉದ್ಧರಣೆಯಿಂದ ನಿಮ್ಮ ಮನಸ್ಸಿನ ಮೇಲೆ ಉಂಟಾಗುವ ಪ್ರಭಾವ ಈ ಭಿನ್ನ ಭಿನ್ನವಾದ ವಾಕ್ಯಗಳನ್ನು ಓದುವುದರಿಂದ ಆಗುವುದಿಲ್ಲ ಎಂಬ ವಿಷಯ ಸ್ವತಃ ನಿಮ್ಮ ಅನುಭವಕ್ಕೆಬರುವುದು.

ಪದಾನುಪದ ಅನುವಾದ ಪ್ರಭಾವಹೀನವಾಗಲು ಇನ್ನೊಂದು ಕಾರಣವೂ ಇದೆ. ಇದು ಅತ್ಯಂತ ಪ್ರಮುಖ ಕಾರಣವಾಗಿದೆ. ಅದೇನೆಂದರೆ ಕುರ್ಆನಿನ ವಿವರಣೆ ಲೇಖನದ ಶೈಲಿಯಲ್ಲಿದೆ. ಅದನ್ನು ಭಾಷಾಂತರಿಸುವಾಗ ಭಾಷಣ ಶೈಲಿಯನ್ನು ಲೇಖನದ ಭಾಷೆಗೆ ಪರಿವರ್ತಿಸದಿದ್ದರೆ ಮತ್ತು ಯಥಾರೂಪದಲ್ಲಿ ಅನುವಾದ ಮಾಡಿದರೆ ವಿಷಯವೇ ಪರಸ್ಪರ ಸಂಬಂಧವಿಲ್ಲದ ಉದ್ಧರಣೆಯಾಗುತ್ತದೆ. ಸಮಸ್ತ ವಿಷಯವೇ ಪರಸ್ಪರ ಸಂಬಂಧವಿಲ್ಲದ ಉದ್ಧರಣೆಯಾಗುತ್ತದೆ. ಆರಂಭದಲ್ಲಿ ಕುರ್ಆನನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲಾಗಿರಲಿಲ್ಲವೆಂಬುದು ಸರ್ವವಿಧಿತ. ಇಸ್ಲಾಮಿನ ಸಂದೇಶವನ್ನು ತಲುಪಿಸಲಿಕ್ಕಾಗಿ ಸಂದರ್ಭಾನುಸಾರ ಭಾಷಣದ ರೂಪದಲ್ಲಿ ಅದನ್ನು ಪ್ರವಾದಿವರ್ಯರ(ಸ) ಮೇಲೆ ಅವತೀರ್ಣಗೊಳಿಸಲಾಗುತ್ತಿತ್ತು. ಪ್ರವಾದಿವರ್ಯರು(ಸ) ಅದನ್ನು ಒಂದು ಪ್ರವಚನದ ರೂಪದಲ್ಲಿ ಜನರಿಗೆ ಕೇಳಿಸುತ್ತಿದ್ದರು. ಭಾಷಣ ಮತ್ತು ಲೇಖನದ ಭಾಷೆಯಲ್ಲಿ ಸ್ವಾಭಾವಿಕವಾಗಿ ಬಹಳ ವ್ಯತ್ಯಾಸವಿದೆ. ಉದಾಹರಣೆಗೆ ಲೇಖನದಲ್ಲಿ ಸಂದೇಹವೊಂದನ್ನು ವಿವರಣೆ ನೀಡಿ ನಿವಾರಿಸಲಾಗುತ್ತದೆ. ಆದರೆ ಭಾಷಣದ ವೇಳೆ ಸಂದೇಹಪಡುವವರು ಸ್ವತಃ ಮುಂದಿರುತ್ತಾರೆ. ಆದ್ದರಿಂದ ಹೆಚ್ಚಿನ ವೇಳೆ "ಜನರು ಹೀಗೆ ಹೇಳುತ್ತಾರೆ" ಎಂದು ಹೇಳುವ ಔಚಿತ್ಯವೇ ತಲೆದೋರುವುದಿಲ್ಲ. ಬದಲಾಗಿ ಮಾತಿನ ಆರಂಭದಲ್ಲೇ ಭಾಷಣಕಾರ ಅವರ ಸಂದೇಹಕ್ಕೆ ಉತ್ತರವನ್ನು ನೀಡಿ ಬಿಡುತ್ತಾನೆ. ಲೇಖನದಲ್ಲಿ ನಿರೂಪಣೆ ಮಾಡಲಾಗುತ್ತಿರುವ ವಿಷಯಕ್ಕೆ ಹೊರತಾದ, ಆದರೆ ಅದರೊಂದಿಗೆ ಹತ್ತಿರದ ಸಂಬಂಧವಿರುವ ವಿಷಯವನ್ನು ಹೇಳಬೇಕಿದ್ದರೆ ಅದನ್ನು ಹೇಗಾದರೂ ಪಡೆನುಡಿಯ ರೂಪದಲ್ಲಿ ಮೂಲ ವಿಷಯದಿಂದ ಪ್ರತ್ಯೇಕಿಸಿ ಬರೆಯಲಾಗುತ್ತದೆ. ವಿಷಯ ಸರಣಿ ಮುರಿಯದಿರಲೆಂಬುದೇ ಇದರ ಉದ್ದೇಶ. ಆದರೆ ಭಾಷಣದಲ್ಲಿ ಕೇವಲ ಧಾಟಿಯನ್ನು ಬದಲಿಸಿ ಅನೇಕ ಉಪಮಾತುಗಳನ್ನು ಭಾಷಣಕಾರ ಹೇಳುತ್ತಾ ಹೋಗುತ್ತಾನೆ. ಅದರಲ್ಲಿ ಯಾವುದೇ ಅಸಂಬದ್ಧತೆಯೂಕಾಣಿಸುವುದಿಲ್ಲ.

ಲೇಖನದಲ್ಲಿ ವಿಷಯ ಮತ್ತು ಪರಿಸರದೊಂದಿಗೆ ಸಂಬಂಧ ಕಲ್ಪಿಸಲು ಪದಗಳ ಸಹಾಯ ಪಡೆಯಬೇಕಾಗುತ್ತದೆ. ಆದರೆ ಭಾಷಣದಲ್ಲಿ ಪರಿಸರ ಸ್ವತಃ ವಿಷಯದೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತದೆ. ಪರಿಸರದ ಬಗ್ಗೆ ಬೊಟ್ಟು ಮಾಡದೆ ಆಡುವ ಮಾತುಗಳಲ್ಲೂ ಯಾವುದೇ ರೀತಿಯ ಅಂತರ ಗೋಚರಿಸುವುದಿಲ್ಲ. ಭಾಷಣದಲ್ಲಿ ಮಾತನಾಡುವವರು ಮತ್ತು ಸಂಭೋದಿತರು ಆಗಾಗ ಬದಲಾಗುತ್ತಿರುತ್ತಾರೆ. ಭಾಷಣಕಾರ ತನ್ನ ಮಾತಿನ ಬಲದಿಂದ ಸಂದರ್ಭಕ್ಕನುಸಾರ ಕೆಲವೊಮ್ಮೆ ಒಂದು ಗುಂಪನ್ನು ಪರೋಕ್ಷವಾಗಿ ಪ್ರಸ್ತಾವಿಸುತ್ತಾನೆ. ಮತ್ತೊಮ್ಮೆ ನೇರವಾಗಿ ಅವರನ್ನು ಪ್ರತ್ಯಕ್ಷರೆಂದು ಬಗೆದು ಸಂಬೋಧಿಸುತ್ತಾನೆ. ಕೆಲವೊಮ್ಮೆ ಏಕವಚನವನ್ನುಪಯೋಗಿಸಿದರೆ ಮತ್ತೆ ಕೆಲವೊಮ್ಮೆ ಬಹುವಚನವನ್ನುಪಯೋಗಿಸುತ್ತಾನೆ. ಕೆಲವೊಮ್ಮೆ ಅವನು ಸ್ವತಃ 'ಪ್ರಥಮ ಪುರುಷ'ನಾಗಿರುತ್ತಾನೆ. ಮತ್ತೆ ಕೆಲವೊಮ್ಮೆ ಬೇರೆ ವಿಭಾಗದವರ ಪರವಾಗಿ ಮಾತನಾಡುತ್ತಾನೆ. ಕೆಲವೊಮ್ಮೆ ಅವನು ಯಾವುದೋ ಉನ್ನತ ಶಕ್ತಿಯನ್ನು ಪ್ರತಿನಿಧಿಸುತ್ತಾನೆ. ಮಗದೊಮ್ಮೆ ಆ ಉನ್ನತ ಶಕ್ತಿ ಸ್ವತಃ ಅವನ ಬಾಯಿಯಿಂದ ಮಾತನಾಡಲಾರಂಭಿಸುತ್ತದೆ. ಇದು ಭಾಷಣಕ್ಕೆ ಒಂದು ಮೆರುಗನ್ನು ತಂದು ಕೊಡುತ್ತದೆ. ಆದರೆ ಲೇಖನದಲ್ಲಿ ಈ ವಿಷಯ ಅಸಂಬದ್ಧವಾಗಿ ಕಾಣುತ್ತದೆ. ಆದ್ದರಿಂದ ಯಾವುದೇ ಭಾಷಣವನ್ನು ಲಿಖಿತ ರೂಪಕ್ಕೆ ತರಲಾದರೆ ಅದನ್ನು ಓದುವವನಿಗೆ ಒಂದು ರೀತಿಯ ಅಸಂಬದ್ಧತೆ ಗೋಚರಿಸುತ್ತದೆ. ಭಾಷಣವನ್ನು ಮಾಡಲಾದ ಪರಿಸರ ಮತ್ತು ಸಂದರ್ಭದಿಂದ ವ್ಯಕ್ತಿ ಎಷ್ಟು ದೂರವಾಗಿರುತ್ತನೋ ಅಷ್ಟೇ ಪ್ರಮಾಣದಲ್ಲಿ ಅವನಲ್ಲಿ ಇಂತಹ ಭಾವನೆ ಹೆಚ್ಚೆಚ್ಚು ಮೂಡುತ್ತದೆ. ತಿಳಿಗೇಡಿಗಳು ಅರಬಿ ಕುರ್ಆನಿನ ಬಗ್ಗೆ ಯಾವ ಅಸಂಬದ್ಧತೆಯನ್ನು ಆರೋಪಿಸುತ್ತಾರೋ ಅದಕ್ಕೆ ಕಾರಣ ಇದುವೇ ಆಗಿದೆ. ಅಲ್ಲಿ ವ್ಯಾಖ್ಯಾನ ಮತ್ತು ಟಿಪ್ಪಣಿಯ ಮೂಲಕ ವಿಷಯದೊಂದಿಗೆ ಅದಕ್ಕಿರುವ ಸಂಬಂಧವನ್ನು ಸ್ಪಷ್ಟಪಡಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಏಕೆಂದರೆ ಕುರ್ಆನಿನ ಮೂಲ ಉಲ್ಲೇಖದಲ್ಲಿ ಯಾವುದೇ ರೀತಿಯ ಏರುಪೇರು ಮಾಡುವುದು ನಿಷಿದ್ಧವಾಗಿದೆ. ಆದರೆ ಇತರ ಭಾಷೆಗೆ ಪವಿತ್ರ ಕುರ್ಆನಿನ ಭಾವಾನುವಾದ ಮಾಡುವಾಗ ಭಾಷಣದ ಭಾಷೆಯನ್ನು ಎಚ್ಚರದೊಂದಿಗೆ ಲೇಖನ ಭಾಷೆಗೆ ಪರಿವರ್ತಿಸಲಾದರೆ ಸುಲಭವಾಗಿ ಈ ಸಂಬಂಧರಾಹಿತ್ಯವನ್ನು ನಿವಾರಿಸಬಹುದು.

ಅಲ್ಲದೆ, ನಾನು ಈಗಾಗಲೇ ಸೂಚ್ಯವಾಗಿ ಹೇಳಿರುವಂತೆ ಕುರ್ಆನಿನ ಪ್ರತಿಯೊಂದು ಅಧ್ಯಾಯವೂ ಇಸ್ಲಾಮಿನ ಸಂದೇಶ ಪ್ರಚಾರದ ನಿರ್ದಿಷ್ಟ ಸಂದರ್ಭದಲ್ಲಿ ಅವತೀರ್ಣಗೊಂಡ ಭಾಷಣವಾಗಿದೆ. ಅದಕ್ಕೆ ನಿರ್ದಿಷ್ಟ ಹಿನ್ನೆಲೆಯಿರುತ್ತಿತ್ತು. ನಿರ್ದಿಷ್ಟ ಪರಿಸ್ಥಿತಿಯಿಂದಾಗಿ ಅದರ ಅವಶ್ಯಕತೆ ತಲೆದೋರುತ್ತಿತ್ತು. ಕೆಲವು ಅಗತ್ಯಗಳ ಈಡೇರಿಕೆಗಾಗಿ ಅವು ಅವತೀರ್ಣಗೊಳ್ಳುತ್ತಿದ್ದವು. ಈ ಹಿನ್ನೆಲೆ ಮತ್ತು ಅವತೀರ್ಣ ಕಾಲದೊಂದಿಗೆ ಕುರ್ಆನಿನ ಅಧ್ಯಾಯಗಳು ಅತ್ಯಂತ ಆಳವಾದ ಸಂಬಂಧವನ್ನು ಹೊಂದಿವೆ. ಅದನ್ನು ಹೊರತುಪಡಿಸಿ ಬರೆ ಶಬ್ದಾನುವಾದವನ್ನು ವ್ಯಕ್ತಿಯ ಮುಂದಿರಿಸಲಾದರೆ ಅನೇಕ ವಿಷಯಗಳನ್ನು ಅವನು ಸರ್ವಥಾ ತಿಳಿಯಲಾರ. ಮತ್ತೆ ಕೆಲವು ವಿಷಯಗಳನ್ನು ಅವನು ತದ್ವಿರುದ್ಧವಾಗಿ ತಿಳಿದುಕೊಳ್ಳಬಹುದು.ಕುರ್ಆನಿನ ಇಂಗಿತವಂತೂ ಅವನ ಮನಸ್ಸಿಗೆ ಎಟುಕಲು ಸಾಧ್ಯವೇ ಇಲ್ಲ. ಅರಬಿ ಕುರ್ಆನಿನಲ್ಲಿ ಈ ತೊಡಕನ್ನು ನಿವಾರಿಸಲಿಕ್ಕಾಗಿ ವ್ಯಾಖ್ಯಾನದ ಸಹಾಯ ಪಡೆಯಬೇಕಾಗಿದೆ. ಏಕೆಂದರೆ ಮೂಲ ಕುರ್ಆನಿನಲ್ಲಿ ಯಾವುದೇ ಹೆಚ್ಚಳ ಮಾಡುವಂತಿಲ್ಲ. ಆದರೆ ಇತರ ಭಾಷೆಯಲ್ಲಿ ಅದರ ಭಾವಾನುವಾದ ಮಾಡುವಾಗ ನಾವು ತಕ್ಕಮಟ್ಟಿಗೆ ಮೂಲವನ್ನು ಹಿನ್ನೆಲೆ ಮತ್ತು ಅವತೀರ್ಣದ ಸಂದರ್ಭದೊಂದಿಗೆ ಜೋಡಿಸುತ್ತಾ ಹೋಗುವ ಸ್ವಾತಂತ್ರ್ಯವನ್ನುಪಯೋಗಿಸಬಹುದು. ಇದರಿಂದ ವಾಚಕನಿಗೆ ಅದು ಅರ್ಥಪೂರ್ಣವೆನಿಸುತ್ತದೆ.

ಇನ್ನೊಂದು ವಿಷಯವೂ ಗಮನಾರ್ಹ. ಕುರ್ಆನ್ ಸುಸ್ಪಷ್ಟವಾದ ಅರಬಿ ಭಾಷೆಯಲ್ಲಿ ಅವತೀರ್ಣಗೊಂಡಿದ್ದರೂ ಅದರ ಜತೆಗೆ ಅದು ತನ್ನದೇ ಆದ ವಿಶಿಷ್ಟ ಪಾರಿಭಾಷಿಕ ಶೈಲಿಯನ್ನು ಹೊಂದಿದೆ. ಅನೇಕ ಪದಗಳನ್ನು ಅದು ಅದರ ಶಬ್ದಾರ್ಥಕ್ಕಿಂತ ಭಿನ್ನವಾಗಿ ನಿರ್ದಿಷ್ಟ ಅರ್ಥದಲ್ಲಿ ಉಪಯೋಗಿಸಿದೆ. ವಿಬಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥದಲ್ಲಿ ಉಪಯೋಗಿಸಲ್ಪಟ್ಟಂತಹ ಅನೇಕ ಪದಗಳೂ ಇವೆ. ಪದಬದ್ಧವಾದ ಅನುವಾದದಲ್ಲಿ ಪಾರಿಭಾಷಿಕ ಶೈಲಿಯನ್ನು ರಿಯಾಯಿತಿಯನ್ನು ಗಮನದಲ್ಲಿರಿಸುವುದು ಬಹಳ ತ್ರಾಸದಾಯಕ. ಅಲ್ಲದೆ ಅದನ್ನು ಗಮನದಲ್ಲಿರಿಸುವುದರಿಂದ ಓದುಗರು ಹೆಚ್ಚಿನ ವೇಳೆ ಹಲವು ರೀತಿಯ ತಪ್ಪು ತಿಳುವಳಿಕೆ ಮತ್ತು ಗೊಂದಲದಲ್ಲಿ ಸಿಲುಕುತ್ತಾರೆ. ಉದಾಹರಣೆಗೆ 'ಕುಫ್ರ್' ಎಂಬ ಪದವನ್ನೇ ತೆಗೆದುಕೊಳ್ಳಿ, ಅದು ಕುರ್ಆನಿನ ಪಾರಿಭಾಷಿಕದಲ್ಲಿ, ಅರಬಿ ಅರ್ಥಕೋಶ ಮತ್ತು ಸ್ವತಃ ನಮ್ಮ ಕರ್ಮಶಾಸ್ತ್ರಜ್ಞರು ಮತ್ತು ಆ ಭಾಷೆಯನ್ನಾಡುವವರ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ಹೊಂದಿದೆ. ಕುರ್ಆನಿನಲ್ಲೂ ಆ ಪದ ಎಲ್ಲಾ ಕಡೆಗಳಲ್ಲಿ ಒಂದೇ ಅರ್ಥದಲ್ಲಿ ಉಪಯೋಗವಾಗಿಲ್ಲ. ಕೆಲವೆಡೆ ಈ ಪದದ ಅರ್ಥ ಸಂಪೂರ್ಣವಾಗಿ ವಿಶ್ವಾಸರಾಹಿತ್ಯದ ಸ್ಥಿತಿಯಾಗಿದೆ. ಕೆಲವೆಡೆ ಇದರರ್ಥ ನಿರಾಕರಣೆ ಎಂದು ಮಾತ್ರವಾಗಿದೆ. ಕೆಲವೆಡೆ ಇದು ಕೃತಘ್ನತೆ ಮತ್ತು ಉಪಕಾರ ವಿಸ್ಮರಣೆಯೆಂಬ ಅರ್ಥದಲ್ಲಿ ಪ್ರಯೋಗವಾಗಿದೆ. ಕೆಲವೆಡೆ ವಿಶ್ವಾಸದ ಬೇಡಿಕೆಗಳನ್ನು ಈಡೇರಿಸದಿರುವುದನ್ನು 'ಕುಫ್ರ್' ಎನ್ನಲಾಗಿದೆ. ಕೆಲವೆಡೆ ವಿಶ್ವಾಸವನ್ನು ಪ್ರಕಟಿಸಿ ಕೃತಿಯಲ್ಲಿ ಅದರ ನಿರಾಕರಣೆ ಮಾಡಿದ್ದಕ್ಕೆ ಈ ಪದ ಬಳಸಲಾಗಿದೆ. ಕೆಲವೆಡೆ ಮೇಲ್ನೋಟದ ಅನುಸರಣೆ ಮತ್ತು ಅವಿಶ್ವಾಸವನ್ನು 'ಕುಫ್ರ್' ಎಂದು ಬಣ್ಣಿಸಲಾಗಿದೆ. ಹೀಗೆ ವಿವಿಧ ಸಂದರ್ಭಗಳಲ್ಲಿ ನಾವು 'ಕುಫ್ರ್' ಎಂಬ ಪದವನ್ನು 'ಸತ್ಯನಿಷೇಧ'ವೆಂದೇ ಭಾಷಾಂತರಿಸಿದರೆ ಅಥವಾ ಬೇರಾವುದಾದರೊಂದು ಪದವನ್ನೇ ಬಳಸಿದರೆ ಭಾಷಾಂತರವೇನೋ ಸರಿಯೆನಿಸಬಹುದು. ಆದರೆ ಓದುಗರು ಅದರಿಂದಾಗಿ ಕೆಲವೆಡೆ ಅರ್ಥದಿಂದ ವಂಚಿತರಾಗುತ್ತಾರೆ, ಇನ್ನು ಕೆಲವೆಡೆ ತಪ್ಪುಕಲ್ಪನೆಗೀಡಾಗುತ್ತಾರೆ ಮತ್ತೆ ಕೆಲವೆಡೆ ಗೊಂದಲದಲ್ಲಿ ಸಿಲುಕುತ್ತಾರೆ.

ಶಬ್ದಾನುವಾದದ ಈ ದೋಷ ಮತ್ತು ಕೊರತೆಯ ಅಂಶಗಳನ್ನು ನೀಗಿಸಲಿಕ್ಕಾಗಿಯೇ ನಾನು 'ಭಾವಾನುವಾದದ' ವಿಧಾನವನ್ನನುಸರಿಸಿದ್ದೇನೆ. ನಾನು ಕುರ್ಆನಿನ ಪದಗಳಿಗೆ ಉರ್ದು ಪರ್ಯಾಯವನ್ನು ಹುಡುಕುವ ಬದಲು, ಕುರ್ಆನಿನ ವಾಕ್ಯವನ್ನು ಓದಿದಾಗ ನನಗೆ ತಿಳಿದು ಬರುವ ಅರ್ಥ ವಿವರಣೆಯನ್ನು ಮತ್ತು ಅದು ನನ್ನ ಮನಸ್ಸಿನ ಮೇಲೆ ಬೀರುವ ಪ್ರಭಾವವನ್ನು ಸಾಧ್ಯವಿರುವಷ್ಟು ಆರೋಗ್ಯಪೂರ್ಣವಾಗಿ ನನ್ನ ಭಾಷೆಗೆ ವರ್ಗಾಯಿಸಲು ಪ್ರಯತ್ನಿಸಿದ್ದೇನೆ. ವಿವರಣಾ ಶೈಲಿಯಲ್ಲಿ ಭಾಷಾಂತರದ ಛಾಪು ಇರುವ ಬದಲು ತಿಳಿಯಾದ ಅರಬಿಯ ತಿಳಿಯಾದ ಉರ್ದು ಭಾವಾನುವಾದವಿರಬೇಕು. ಭಾಷಣದ ಸಂಬಂಧವು ಸಹಜವಾಗಿ ಲೇಖನದ ಭಾಷೆಯಲ್ಲಿ ವ್ಯಕ್ತವಾಗಬೇಕು. ದೇವವಾಣಿಯ ಇಂಗಿತ ಮತ್ತು ಉದ್ದೇಶ ಸುಸ್ಪಷ್ಟವಾಗುವುದರ ಜತೆಗೆ ಅದರ ರಾಜಠೀವಿ ಮತ್ತು ವಾಕ್ ಶಕ್ತಿಯು ಭಾವಾನುವಾದದಲ್ಲೂ ಸಾಧ್ಯವಿರುವಷ್ಟು ಪ್ರತಿಬಿಂಬಿಸಬೇಕು ಎಂಬುದನ್ನು ಗಮನದಲ್ಲಿರಿಸಿಯೇ ನಾನು ಅದಕ್ಕಾಗಿ ಪ್ರಯತ್ನಿಸಿದ್ದೇನೆ. ಇಂತಹ ಸ್ವತಂತ್ರ ಭಾಷಾಂತರಕ್ಕಾಗಿ ಶಬ್ದಾನುವಾದದ ನಿರ್ಬಂಧಗಳಿಂದ ಮುಕ್ತವಾಗಿ ಅರ್ಥ ವಿವರಣೆ ಮಾಡುವ ಧೈರ್ಯ ತೋರಬೇಕಾದುದು ಅನಿವಾರ್ಯವಾಗಿತ್ತು. ಆದರೆ ಇದು ದೇವವಾಣಿಯ ವಿಷಯವಾದ್ದರಿಂದ ನಾನು ಅಂಜುತ್ತಲೇ ಈ ಸ್ವಾತಂತ್ರ್ಯವನ್ನು ಉಪಯೋಗಿಸಿದೆ. ನನಗೆ ಸಾಧ್ಯವಿರುವಷ್ಟು ಎಚ್ಚರಿಕೆಯನ್ನು ನಾನು ಈ ನಿಟ್ಟಿನಲ್ಲಿ ಪಾಲಿಸಿದ್ದೇನೆ. ಕುರ್ಆನ್ ತನ್ನ ಉದ್ಧರಣೆಯನ್ನು ಎಷ್ಟು ಸ್ವತಂತ್ರವಾಗಿ ವಿವರಿಸುವ ಅನುಮತಿ ಕೊಡುತ್ತದೋ ಅದನ್ನು ಮೀರದಿರಲು ನಾನು ಗರಿಷ್ಠ ಪ್ರಯತ್ನಿಸಿದ್ದೇನೆ. ಈ ಭಾಷಾಂತರದ ಜತೆಗೆ, ಟಿಪ್ಪಣಿಯಿಲ್ಲದ ವಿಷಯಪೂರ್ಣವಾಗಿ ಮನವರಿಕೆಯಗದು ಎಂದು ತೋಚಿದ ಕಡೆಗಳಲ್ಲಿ ಮಾತ್ರ ನಾನು ಸಂಕ್ಷಿಪ್ತ ಟಿಪ್ಪಣಿಗಳನ್ನು ನೀಡಿದ್ದೇನೆ. ಏಕೆಂದರೆ ಕೇವಲ ಭಾಷಾಂತರವನ್ನು ಮಾತ್ರ ಓದಬೇಕೆಂದು ಬಯಸುವವರಿಗಾಗಿ ಈ ಭಾಷಾಂತರವನ್ನು ಪ್ರಕಟಿಸಲಾಗುತ್ತಿದೆ. ಸವಿವರವಾಗಿ ಪವಿತ್ರ ಕುರ್ಆನನ್ನು ಓದಲಿಚ್ಛಿಸುವವರು ನನ್ನ ಕುರ್ಆನ್ ವ್ಯಾಖ್ಯಾನವಾದ 'ತಫ್ಹೀಮುಲ್ ಕುರ್ಆನ್' ಅಭ್ಯಸಿಸುವುದು ಉಪಯುಕ್ತವಾದೀತು.

ನನ್ನ ದೃಷ್ಟಿಯಲ್ಲಿ ಭಾಷಾಂತರದಿಂದ ಪ್ರಯೋಜನ ಪಡೆಯುವ ಅತ್ಯುತ್ತಮ ವಿಧಾನವೇನೆಂದರೆ- ನೀವು ದಿನಂಪ್ರತಿ ಕುರ್ಆನಿನ ಎಷ್ಟು ಭಾಗವನ್ನು ಓದಬಯಸುತ್ತೀರೋ ಅದರ ಮೂಲವನ್ನು ಮೊದಲು ಓದಿಕೊಳ್ಳಿ. ಅನಂತರ ಒಂದೊಂದೇ ಸೂಕ್ತದ ಮುಂದಿರುವ ಅದರ ಭಾಷಾಂತರವನ್ನು ಓದಿ. ಅನಂತರ ಕುರ್ಆನಿನ ಆ ಭಾಗವನ್ನು ಪೂರ್ಣವಾಗಿ ಅನುಕ್ರಮವಾಗಿ ಓದಿರಿ. ಇದರಿಂದ ಇಂದು ನೀವು ಓದಿರುವ ಕುರ್ಆನಿನ ಆ ಭಾಗದ ಅರ್ಥವೇನು ಎಂದು ನಿಮಗೆ ಮನವರಿಕೆಯಾಗುವುದು. ಪ್ರತಿಯೊಂದು ಪದದ ಅರ್ಥವಿವರಣೆಯೂ ತಿಳಿದು ಬರುವಂತೆ ಅದರ ಜತೆ ಶಬ್ದಾನುವಾದವನ್ನು ಮುಂದಿರಿಸಿಕೊಂಡರೆ ಒಳ್ಳೆಯದು.

ಲಾಹೋರ್
ಸಫರ್ 7, ಹಿ.ಶ. 1391
ಎಪ್ರಿಲ್ 4, ಕ್ರಿ. ಶ. 1971
ಅಬುಲ್ ಆಲಾ

Publishers
SHANTHI PRAKASHANA
Hidayath Centre, Beebi Alabi Road, Mangalore - 575 001
e-mail: info@shanthiprakashana.com
www.shanthiprakashana.com

Powered by signrOots Technologies.